ಕ್ಷುದ್ರಕ

ಅಲೆಕ್ಸಾಂಡರನ ದಂಡಯಾತ್ರೆಯ ಕಾಲದಲ್ಲಿ ಪಂಜಾಬಿನಲ್ಲಿದ್ದ ಸಣ್ಣ ಜನಪದಗಳಲ್ಲೊಂದು. ಈ ಜನಪದವನ್ನು ಗ್ರೀಕರು ಆಕ್ಸಿಡ್ರಾಕಾಯ್ ಎಂದು ಕರೆದಿದ್ದಾರೆ. ಪಂಜಾಬಿನ ಮಾಂಟ್ಗೊಮರಿ ಜಿಲ್ಲೆಯಲ್ಲಿದ್ದ ಇವರ ವಿಷಯವಾಗಿ ಮಹಾಭಾರತದಲ್ಲಿ ಉಲ್ಲೇಖವಿದೆ. ಇವರು ಮತ್ತು ನೆರೆಯ ಮಾಳವರು `ಆಯುಧ ಜೀವಿನ್` ಅಥವಾ ಯುದ್ಧವೇ ಕಸಬಾಗಿ ಉಳ್ಳವರು ಎಂದು ವರ್ಣಿತರಾಗಿದ್ದಾರೆ. ಬೀಯಾಸ್ ನದೀಪ್ರಾಂತ್ಯದಿಂದ ಅಲೆಕ್ಸಾಂಡರ್ ಹಿಂದಿರುಗಿದ ಮೇಲೆ ಜೀಲಂ ಮತ್ತು ಚಿನಾಬ್ ನದೀಸಂಗಮ ಪ್ರದೇಶಕ್ಕೆ ಬಂದಾಗ, ಕ್ಷುದ್ರಕರ ಮತ್ತು ಮಾಳವರ ನೇತೃತ್ವದಲ್ಲಿ ಆ ಪ್ರಾಂತ್ಯದ ಸಣ್ಣ ರಾಜ್ಯಗಳೆಲ್ಲ ಒಂದುಗೂಡಿ ಅವನ ಸೈನ್ಯವನ್ನೆದುರಿಸಿದುವು. ಪ್ರತಿಯೊಂದು ನಗರವೂ ಪ್ರತಿಭಟನೆಯ ಕೇಂದ್ರವಾಯಿತು. ಭಾರತೀಯ ಸೈನ್ಯದಲ್ಲಿ 90,000 ಕಾಲಾಳುಗಳೂ 10,000 ಅಶ್ವಾರೋಹಿಗಳೂ 900 ರಥಗಳೂ ಇದ್ದುವೆಂದು ತಿಳಿದುಬಂದಿದೆ. ಶಸ್ತ್ರಸಜ್ಜಿತರಾಗಿ ಎದುರುಬಿದ್ದ 5,000 ಬ್ರಾಹ್ಮಣರ ಪಡೆಯೊಂದನ್ನೂ ಅಲೆಕ್ಸಾಂಡರ್ ಎದುರಿಸಬೇಕಾಯಿತು. ಆದರೂ ಅಲೆಕ್ಸಾಂಡರನಿಗೇ ಜಯ ದೊರಕಿತು. ಹಿಂದೆಂದೂ ಕಾಣದಿದ್ದ ಇಂಥ ಉಗ್ರ ಪ್ರತಿಭಟನೆಯಿಂದ ಗಾಯಗೊಂಡು ಕುಪಿತನಾಗಿದ್ದ ಅಲೆಕ್ಸಾಂಡರ್ ಶತ್ರುಪಡೆಗಳಲ್ಲಿ ಉಳಿದಿದ್ದವರನ್ನೆಲ್ಲ ಕೊಲ್ಲಲು ಸೈನಿಕರಿಗೆ ಅನುಮತಿ ಕೊಟ್ಟ. ಕೊನೆಗೆ ಮಾಳವರೊಂದಿಗೆ ಕ್ಷುದ್ರಕರೂ ಶರಣಾಗಬೇಕಾಯಿತು. ಅಲೆಕ್ಸಾಂಡರನಿಗೆ ಸೋತ ಕ್ಷುದ್ರಕರು ಅನೇಕ ಯುದ್ಧ ರಥಗಳನ್ನೂ ಕುದುರೆಗಳನ್ನೂ ಉಕ್ಕು ಮತ್ತು ನಾರುಡುಗೆಗಳನ್ನೂ ಕಾಣಿಕೆಯಾಗಿ ಅರ್ಪಿಸಿದರು. ಅಲೆಕ್ಸಾಂಡರನೊಂದಿಗೆ ಬಂದಿದ್ದ ಗ್ರೀಕ್ ಬರಹಗಾರರು ಇವರ ದೇಶಾಭಿವಾನ, ಕಾರ್ಯದಕ್ಷತೆ, ತೀಕ್ಷ್ಣಮತಿ ಮತ್ತು ತತ್ತ್ವಜ್ಞಾನಗಳನ್ನು ಪ್ರಶಂಸಿಸಿದ್ದಾರೆ. ಕ್ಷುದ್ರಕರೇ ಮೊದಲಾದ ಗಣರಾಜ್ಯಜನರ ರಣಶೌರ್ಯವನ್ನು ಕಂಡ ಗ್ರೀಕ್ ಸೈನಿಕರು ಸ್ವದೇಶಕ್ಕೆ ಮರಳುವ ಹಠ ಹಿಡಿದದ್ದರಿಂದ ಅಲೆಕ್ಸಾಂಡರ್ ತನ್ನ ದಂಡಯಾತ್ರೆಯನ್ನು ಕೊನೆಗೊಳಿಸಿ ಹಿಂದಿರುಗಬೇಕಾಯಿತು.           			(ಸಿ.ವಿ.ಆರ್.; ಜಿ.ಆರ್.ಆರ್.)